ಫಾಂಟಿನೆಲ್, ಬೆರ್ನಾರ್ ಲ ಬೋವ್ಯಾಡ - 
ಫ್ರೆಂಚ್ ಸಾಹಿತಿ ಹಾಗೂ ವಿಜ್ಞಾನಿ. ರೂವೆನ್ ನಗರದ ಒಬ್ಬ ವಕೀಲನ ಮಗ. ತಾಯಿ ಪ್ರಸಿದ್ಧ ನಾಟಕಕಾರ ಪ್ಟೇರ್ ಕಾರ್ನಾಯನ ಸಹೋದರಿ. ವಿದ್ಯಾಭ್ಯಾಸ ಊರಿನ ಜೆಸ್ಯೂಯಿಟ್ ಪಂಗಡದ ಒಂದು ಶಾಲೆಯಲ್ಲಿ ನಡೆಯಿತು. ಬಾಲಕನಾಗಿದ್ದಾಗಲೆ ಪ್ರಚಂಡ ಬುದ್ಧಿಯ ಶಕ್ತಿಸಾಮಥ್ರ್ಯಗಳನ್ನು ಪ್ರಕಟಗೊಳಿಸಿದ. ಜೆಸ್ಯೂಯಿಟರು ತಮ್ಮ ಪಂಗಡಕ್ಕೆ ಈತನನ್ನು ಸೆಳೆದುಕೊಳ್ಳಲು ಯತ್ನಿಸಿದರು. ಆದರೆ ಈತ ತಂದೆಯ ಒತ್ತಾಯಕ್ಕೆ ಒಳಗಾಗಿ ವಕೀಲನಾಗಬೇಕಾಯಿತು. ವಕೀಲವೃತ್ತಿ ಹಿಡಿಸಲಿಲ್ಲವಾಗಿ ಸಾಹಿತ್ಯ ಸೃಷ್ಟಿಗೆ ತೊಡಗಿದ. ಯುವಕನಾಗಿದ್ದಾಗಲೆ ಪ್ಯಾರಿಸ್ಸಿಗೆ ನಡೆದು ಅಲ್ಲಿನ ವಿದ್ವದ್ಗೋಷ್ಠಿಗಳಲ್ಲಿ ಭಾಗವಹಿಸಿ ಸಾಹಿತ್ಯದಲ್ಲಿ ತನ್ನದೇ ಆದ ಒಂದು ಹೊಸಪದ್ಧತಿಯನ್ನು ಆರಂಭಿಸಿದ.

	ಪ್ಯೇರ್ ಕಾರ್ನಾಯ್ ಮತ್ತು ತಾಮಸ್ ಕಾರ್ನಾಯ್ ಎಂಬ ಉದ್ಧಾಮ ನಾಟಕಾರರ ಸೋದರಳಿಯನಾದ್ದರಿಂದ ತಾನೂ ಅವರಂತೆ ಕವಿ ಮತ್ತು ನಾಟಕಕಾರ ಎಂದು ಫಾಂಟಿನೆಲ್ ಭ್ರಾಂತಿಪಟ್ಟ. ಆ ನಿರಾಧಾರ ನಂಬಿಕೆ ಬಲು ಕಾಲ ಈತನೊಳಗೆ ನೆಲಸಿತ್ತು. ಹಲವು ಕವನಗಳನ್ನು ರಚಿಸಿ ಅಕಾಡೆಮಿಗೆ ಕಳಿಸಿಕೊಟ್ಟ; ಯಾವುದೊಂದಕ್ಕೂ ಬಹುಮಾನ ಬರಲಿಲ್ಲ. ಆಮೇಲೆ ಆಸ್ಟಾರ್ ಎಂಬ ನಾಟಕವನ್ನು ಬರೆದು ಪ್ರದರ್ಶಿಸಿದ (1680). ತಾಮಸ್ ಕಾರ್ನಾಯ್ ತನ್ನ ಸೋದರಳಿಯ ಕಿರಿಯ ನಾಟಕಕಾರರಲ್ಲಿ ಶ್ರೇಷ್ಠನೆಂದು ಮೊದಲೇ ವೃತ್ತಪತ್ರಿಕೆಯಲ್ಲಿ ಡಂಗೂರ ಹಾಕಿದ್ದ. ನಾಟಕಕ್ಕೆ ಪೂರ್ತಿ ಸೋಲು ಉಂಟಾಯಿತು. ಫಾಂಟಿನೆಲ್ ಆಗ ತುಂಬ ವ್ಯಥೆಗೊಂಡನಾದರೂ ಆಮೇಲೆ ನೋಟಕರ ತೀರ್ಪು ನ್ಯಾಯವೆಂದು ಮನಗಂಡು, ನಾಟಕದ ಹಸ್ತಪ್ರತಿಯನ್ನು ಸುಟ್ಟುಹಾಕಿದ. ಆದರೂ ಬಿಡದೆ ನಾಟಕಗಳನ್ನು ಕಟ್ಟುತ್ತಲೇ ಹೋದ. ಅವು ಸಾಧಾರಣ ಮಟ್ಟವನ್ನು ಕೂಡ ಮುಟ್ಟಲಿಲ್ಲ. ಅನಂತರ ಗೀತರೂಪಕ ಒಂದನ್ನು ಹೊರತಂದ. ಆದರೆ ಸೊಬಗೂ ಅಷ್ಟಕ್ಕಷ್ಟೆ. ಕವಿಯಾಗಿ ಅವನಿಗಿದ್ದುದ್ದು ಒಂದೇ ಗುಣ: ಉತ್ಕøಷ್ಟಪದ ಹಾಗೂ ಪದಗುಚ್ಛ ರಚನೆ.

	ತನ್ನ ಅಧ್ಯಯನದ ದಾರಿ ಎತ್ತ ಸಾಗುತ್ತದೆ, ತನ್ನ ನೈಜಶಕ್ತಿ ಯಾವುದರಲ್ಲಿದೆ ಎಂಬುದನ್ನು ಕಂಡುಕೊಂಡು, ಪುರಾತನ ರೋಮನ್ ಕವಿ ಲ್ಯೂಸಿಯನ್ನನಿಂದ ಪ್ರೇರಿತನಾಗಿ `ಸತ್ತವರ ಸಂವಾದಗಳು ಎಂಬ ಕೃತಿಯನ್ನು ಬರೆದ (1683). ಅದು ಮೆಚ್ಚಿಗೆ ಸಂಪಾದಿಸಿತು. ಅಷ್ಟರಿಂದ ತೃಪ್ತನಾಗದೆ ತನಗಿದ್ದ ವೈಜ್ಞಾನಿಕ ಅನುಭವಗಳನ್ನು ಉಪಯೋಗಿಸಿಕೊಂಡು `ಪ್ರಪಂಚದ ಬಹುತ್ವದ ವಿಚಾರಗಳು ಎಂಬ ಖಗೋಳಶಾಸ್ತ್ರ ಸಿದ್ಧಾಂತಗಳನ್ನು ಪ್ರತಿಪಾದಿಸುವ ಶಾಸ್ತ್ರೀಯ ಗ್ರಂಥವನ್ನು ಪ್ರಕಟಿಸಿದ (1686). ವೈಜ್ಞಾನಿಕ ತತ್ತ್ವಗಳನ್ನು ಹೇಗೆ ಜನರಿಗೆ ತಿಳಿಸಬೇಕೆಂಬ ಕಷ್ಟದ ಪ್ರಶ್ನೆಗೆ ಆ ಗ್ರಂಥ ಉತ್ತರ ನೀಡಿತು. 1687ರಲ್ಲಿ `ದಿವ್ಯವಾಣಿಗಳ ಇತಿಹಾಸ ಎಂಬ ಗ್ರಂಥವನ್ನು ಪ್ರಕಟಿಸಿದ. ಅದು ಸ್ವಂತ ಕೃತಿಯಲ್ಲ. ವಾನ್‍ಡೇಲ್ ಎಂಬಾತನ ಲ್ಯಾಟಿನ್ ಬರಹದಿಂದ ಸಂಗ್ರಹಿಸಿದ್ದು. ಈ ಗ್ರಂಥ ಸಾಕಷ್ಟು ವಾದವಿವಾದಗಳನ್ನು ಎಬ್ಬಿಸಿತು. ಆಗ ಹಬ್ಬಿದ್ದ ಪ್ರಾಚೀನರೂ ಅರ್ವಾಚೀನರೂ ಎಂಬ ವಾಗ್ಯುದ್ಧದೊಳಕ್ಕೆ ಹೇಗೋ ಪ್ರವೇಶಿಸಿ ಅರ್ವಾಚೀನರ ಪರವಾಗಿ ಪ್ರಬಂಧ ಬರೆದ (1688). ಆಮೇಲೆ ಭೌತ ವಿದ್ಯಮಾನಗಳ ಪ್ರಾಸಂಗಿಕ ಕಾರಣಗಳನ್ನು ಕುರಿತು ಒಂದು ಪ್ರಬಂಧ ಹೊರತಂದ. ಅನಂತರ ಕಾವ್ಯಕಲೆಯ ಸಮೀಕ್ಷೆ ಎಂಬ ಪುಸ್ತಕ ಹೊರಬಂತು (1995).	

	1691ರಲ್ಲಿ ಈತನಿಗೆ ಫ್ರೆಂಚ್ ಅಕಾಡೆಮಿಯ ಸದಸ್ಯತ್ವ ಲಭಿಸಿತು. ಅನಂತರ ಶಾಸನ ಅಕಾಡೆಮಿ ಮತ್ತು ವಿಜ್ಞಾನ ಅಕಾಡೆಮಿ ಎರಡಕ್ಕೂ ಚುನಾಯಿತನಾದ. ಅಕಾಡೆಮಿ ಕಾರ್ಯದರ್ಶಿಯಾಗಿ (1699) 42 ವರ್ಷಸೇವೆ ಸಲ್ಲಿಸಿದ.	
	(ಎಸ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ